ಆಡಳಿತನಿರ್ವಹಣೆ
ದೇಶದ ಆಡಳಿತ ವ್ಯವಸ್ಥೆಯಲ್ಲಿ ಇದಕ್ಕೆ (ಮ್ಯಾನೇಜ್‍ಮೆಂಟ್) ಪ್ರಧಾನ ಸ್ಥಾನವಿದೆ. ಯಾವುದೇ ಒಂದು ವ್ಯವಸ್ಥಿತ ಸಂಸ್ಥೆಯಲ್ಲಿ, ಅದು ಖಾಸಗಿಯಾಗಿರಲಿ, ಸಾರ್ವಜನಿಕವಾಗಿರಲಿ, ಸರ್ಕಾರದ್ದಾಗಿರಲಿ, ಆಡಳಿತ ನಿರ್ವಹಣೆ ಸುಸೂತ್ರವಾಗಿ ಆಗಬೇಕಾದದ್ದು ಅಗತ್ಯ. ಅದಕ್ಕಾಗಿ ಆಡಳಿತ ನಿರ್ವಹಣೆಯನ್ನು ಒಂದು ಶಾಸ್ತ್ರವನ್ನಾಗಿ ಪರಿಗಣಿಸಿ ಅನೇಕ ವಿಷಯಗಳನ್ನು ಸೂತ್ರೀಕರಿಸಲಾಗಿದೆ. ಅದನ್ನು ಕುರಿತ ಅಧಿಕೃತ ಗ್ರಂಥಗಳೂ ಕೈಪಿಡಿಗಳೂ ಬಂದಿದೆ. ಖಾಸಗಿಯವರೂ ಸರ್ಕಾರವೂ ಅದನ್ನು ಪ್ರಕಟಿಸಿವೆ. ಆಡಳಿತ ನಿರ್ವಹಣೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪಠ್ಯ ವಿಷಯವಾಗಿರುವುದೂ ಉಂಟು. ಅದರಲ್ಲಿ ತೇರ್ಗಡೆಯಾದವರಿಗೆ ಡಿಪ್ಲೊಮ, ಡಿಗ್ರಿಗಳನ್ನು ಕೊಡುತ್ತಾರಲ್ಲದೆ ಅದನ್ನುಳ್ಳವರನ್ನೇ ಕೆಲಸಕ್ಕೆ ಆರಿಸುತ್ತಾರೆ. ಕೆಲವು ವೇಳೆ ಕೆಲಸದಲ್ಲಿರುವವರಿಗೆ ಈ ವಿಷಯದಲ್ಲಿ ತರಬೇತಿ ಕೊಡುವುದೂ ಉಂಟು. ಖಾಸಗಿ ಉದ್ಯಮ ಕ್ಷೇತ್ರಗಳಲ್ಲಿ ದೊಡ್ಡ ಸಂಸ್ಥೆಗಳ ಆಡಳಿತವನ್ನು ನಿರ್ವಹಿಸುವುದು ನಿಜಕ್ಕೂ ಶ್ರಮಸಾಧ್ಯವಾದ, ಬಹು ಜವಾಬ್ದಾರಿಯ ಕೆಲಸ.

ಆಧುನಿಕ ಸರ್ಕಾರಗಳ ಪ್ರಮಾಣ ಮತ್ತು ಸಂಕೀರ್ಣತೆ ಆಡಳಿತದ ವಿಧಾನದ ಅಗತ್ಯತೆಯನ್ನು ಇನ್ನೂ ಹೆಚ್ಚಿಸಿದೆ.
ನಿರ್ವಹಣೆಯ ಜವಾಬ್ದಾರಿಯನ್ನು ಕಡಿಮೆಮಾಡಿ ಕೆಲಸ ಸುಗಮವಾಗುವಂತೆ ಮಾಡಲು ಸರ್ಕಾರ ಅಧಿಕಾರದ, ಕೆಲಸದ, ಹಂಚಿಕೆಯನ್ನು ಮಾಡುತ್ತದೆ. (ನೋಡಿ- ಅಧಿಕಾರಹಂಚಿಕೆ). ಅಲ್ಲದೆ ಅಧಿಕಾರದ ವಿವಿಧ ದರ್ಜೆಗಳನ್ನು ರೂಪಿಸುತ್ತದೆ. (ನೋಡಿ- ಅಧಿಕಾರದರ್ಜೆ). ನ್ಯಾಯಾಂಗ ಮತ್ತು ಶಾಸಕಾಂಗಗಳು ಬೇರೆಯಾಗಬೇಕೆಂದು ಹೇಳುವುದರಲ್ಲೂ ಇದೇ ಉದ್ದೇಶವಿದೆ. ಅನಂತರ ಪ್ರತಿ ಅಧಿಕಾರಿಯ ಅಧಿಕಾರವ್ಯಾಪ್ತಿ ಖಚಿತವಾಗಬೇಕಲ್ಲದೆ ತನ್ನ ಮೇಲಿನ ಮತ್ತು ಕೆಳಗಿನ ಆಡಳಿತವರ್ಗದೊಂದಿಗಿನ ಸಮರ್ಪಕ ಸಂಪರ್ಕ ಸಂಯೋಜನೆ-ಇವು ಅಗತ್ಯ. ಇಷ್ಟಾದ ಮೇಲೆ ನ್ಯಾಯಸಂಬಂಧವಾದ ವ್ಯವಹಾರಗಳಲ್ಲಿ ಜನತೆಯ ಹಲವಾರು ಬೇಡಿಕೆಗಳನ್ನೂ ದೂರುಗಳನ್ನೂ ಪರಿಶೀಲಿಸುವಲ್ಲಿ ಕಾಯಿದೆಗಳೇ ನಿರ್ಣಾಯಕಗಳಾಗಬೇಕು. ಅಂಥವೇ ಸಮಸ್ಯೆಗಳನ್ನು ಹಿಂದಿನವರು ಹೇಗೆ ಪರಿಹರಿಸಿದ್ದಾರೆಂಬ ಅಂಶಗಳು ಮೇಲ್ಪಂಕ್ತಿಗಳಾಗಬಹುದು. ಕಾನೂನಿಗೆ ವಿರುದ್ಧವಾದ ಏನನ್ನೂ ಮಾಡಬಾರದೆಂದ ಮಾತ್ರಕ್ಕೆ ಒಂದೊಂದು ವಿಷಯವನ್ನೂ ವರ್ಷಗಟ್ಟಲೆ ಎಳೆದಾಡುವುದು ಸರಿಯಲ್ಲ. ಇದರಿಂದ ವ್ಯಕ್ತಿಗಳಿಗಲ್ಲದೆ ಸರಕಾರಕ್ಕೂ ನಷ್ಟ. (ನೋಡಿ- ಅತಿನಿಯಮ-ಪದ್ಧತಿ). ಅಧಿಕಾರ ಅಥವಾ ಅದರ ನಿರ್ವಹಣೆ ಇರುವುದು ಜನಪೀಡನೆಗಲ್ಲ. ಅವರ ಅನುಕೂಲಕ್ಕೆ ಮಾತ್ರ. ಅದು ದಾರಿಯೇ ವಿನಾ ಗುರಿಯಲ್ಲ. ತೀರ್ಮಾನ ಮಾಡುವಾಗಲೂ ಪೂರ್ವಾಗೃಹ, ಸ್ವಜನ ಪಕ್ಷಪಾತಗಳು ಇರಬಾರದು, ಆದ್ದರಿಂದ ಸಹಾಯಕ ಅಧಿಕಾರವರ್ಗದವರ ಎಲ್ಲ ಸಲಹೆಗಳನ್ನೂ ತೆಗೆದುಕೊಂಡು ಕೊನೆಯ ನಿರ್ಣಯವನ್ನು ಕೊಡಬೇಕಾದ ಮೇಲಾಧಿಕಾರಿ ನ್ಯಾಯ ಪಕ್ಷಪಾತಿಯಾಗಿರಬೇಕಾಗುತ್ತದೆ.
ಇನ್ನಾವ ರಾಜ್ಯಪದ್ಧತಿಯಲ್ಲೂ ಕಾಣಬರದ ಒಂದು ಅಂಶ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಇದೆ. ಉನ್ನತ ಆಡಳಿತಗಾರರಾದ ಅಧ್ಯಕ್ಷ, ಉಪಾಧ್ಯಕ್ಷ, ಮಂತ್ರಿಗಳು, ಸಂಸದೀಯ ಸದಸ್ಯರು ಕಾಲಕಾಲಕ್ಕೆ, ಪ್ರತಿ ಐದು ವರ್ಷಗಳಿಗೊಮ್ಮೆ (ಭಾರತದಲ್ಲಿ) ಬದಲಾಗುತ್ತಿರುತ್ತಾರೆ. ಆದರೆ ಆಡಳಿತವರ್ಗ, ಆಡಳಿತ ವಿಧಾನ ಶಾಶ್ವತವಾಗಿರುತ್ತದೆ. ಆದ್ದರಿಂದ ಅದನ್ನು ಸಡಿಲ ಮಾಡಲಾರದು.
(ಎಂ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ